ಹೆವಿಸಿ, ಜಾರ್ಜ್ ಫೋನ್
1885-1966. ಹಂಗೆರಿಯನ್-ಡೇನಿಷ್-ಸ್ವೀಡಿಷ್ ರಸಾಯನ ವಿe್ಞÁನಿ, ವಿಕಿರಣಪಟು ಅನುರೇಖ ತಂತ್ರ (ಟ್ರೇಸರ್ ಟೆಕ್ನಿಕ್) ಶೋಧನೆಯ ಪ್ರವರ್ತಕ. ಈತನ ಕಲಿಕೆ ಹಂಗೆರಿ ಮತ್ತು ಜರ್ಮನಿಗಳಲ್ಲಿ. ಎರಡು ಅಪೂರ್ವ ಸಂಶೋಧನೆಗಳಿಗಾಗಿ (1923) ಜಗದ್ವಿಖ್ಯಾತನಾಗಿದ್ದಾನೆ. 19ನೆಯ ಶತಮಾನದಲ್ಲಿ ನವಧಾತುಗಳ ಆವಿಷ್ಕಾರ ಭರದಿಂದ ಸಾಗಿತ್ತು. 20ನೆಯ ಶತಮಾನದ ಆದಿಯ ಹೊತ್ತಿಗೆ ಮೆಂಡಲೀಫನ ಆವರ್ತಕೋಷ್ಟಕದಲ್ಲಿ (ನೋಡಿ) ಆತ ಖಾಲಿ ಬಿಟ್ಟಿದ್ದ ಬಹುತೇಕ ಸ್ಥಾನಗಳು ಭರ್ತಿಯಾಗಿ ಹೋಗಿದ್ದುವು. ಧಾತುಗಳ ರಾಸಾಯನಿಕ ಗುಣಗಳಿಗೆ ಅವುಗಳ ಪರಮಾಣು ಸಂಖ್ಯೆ ಕಾರಣವೇ ವಿನಾ ಪರಮಾಣು ತೂಕವಲ್ಲ. ಆದ್ದರಿಂದ ಅವುಗಳ ವರ್ಗೀಕರಣಕ್ಕೆ ಅರ್ಥಾತ್ ಆವರ್ತಕೋಷ್ಟಕಕ್ಕೆ ಪರಮಾಣು ಸಂಖ್ಯೆ ಆಧಾರವಾಗಿರತಕ್ಕದ್ದು ಎಂದು ಮೋಸ್ಲೆ (1887-1915) ಪ್ರತಿಪಾದಿಸಿ ಆ ಕೋಷ್ಟಕವನ್ನು ಅಗತ್ಯವಿದ್ದ ಕಡೆ ಪುನಾರಚಿಸಿದ. ಆಗ ಅದರಲ್ಲಿದ್ದ ವಿರೋಧಾಭಾಸಗಳು ಮಾಯವಾದುವು. ನೀಲ್ಸ್ ಬೋರ್ (1885-1962) ಅವರು ಮಂಡಿಸಿದ ನೂತನ ಪರಮಾಣು ರಚನಾಸಿದ್ಧಾಂತವೂ ಆಧುನಿಕ ದೀರ್ಘ ಆವರ್ತಕೋಷ್ಟಕದ ರೂಪಣೆಗೆ ನೆರವಾಯಿತು. 72ನೇ ಸ್ಥಾನ ಮಾತ್ರ ತೆರವಾಗಿತ್ತು. ಅದರ ಪತ್ತೆಗೆ ಹೆವೆಸಿ ಹವಣಿಸಿದ. ಆಗ ಹೆವೆಸಿ ಬೋರ್ ಜೊತೆ ಕೂಪನ್‍ಹೇಗನ್‍ನಲ್ಲಿ ಸಂಶೋಧನಾ ಕಾರ್ಯದಲ್ಲಿ ಮಗ್ನನಾಗಿದ್ದ. ಆವರ್ತಕೋಷ್ಟಕದಲ್ಲಿ ಸಿರ್ಕೋನಿಯಮ್ 72ನೇ ಕ್ರಮಾಂಕದ ಧಾತುವಿನ ಮೇಲಿನ ಸ್ಥಾನದಲ್ಲಿದೆ (40). ಅಂದರೆ ಎರಡು ಧಾತುಗಳಿಗೂ ರಾಸಾಯನಿಕ ಹೋಲಿಕೆ ಇರಬೇಕು. ಹಾಗಿದ್ದರೆ ಸಿರ್ಕೊನಿಯಮ್ ಅದುರುಗಳಲ್ಲಿ 72ನೆಯ ಧಾತುವಿನ ಅಂಶವಿರಲೇಬೇಕು. ಬೋರ್ ಮಾಡಿದ ಈ ಸಲಹೆ ಸಮಯೋಚಿತವಾಗಿತ್ತು. ಇದರ ಪ್ರಕಾರ ಹೆವಿಸಿ ಮತ್ತು ಕಾಸ್ಟರ್ (1889-1950) ಅದುರುಗಳನ್ನು ಪರೀಕ್ಷಿಸಿದಾಗ ಅದರಲ್ಲಿ 30%ರಷ್ಟು ನೂತನ ಧಾತುವೊಂದರ ಆಕ್ಸೈಡ್ ಇರುವುದು ಕಂಡುಬಂತು. ಅದರ ಎಕ್ಸ್‍ಕಿರಣ  ರೋಹಿತದ  ಪ್ರಕಾರ  ಅದು  72  ಕ್ರಮಾಂಕದ ಧಾತುವೇ ಎಂಬುದು ದೃಢಪಟ್ಟಿತು. ಅದನ್ನು ಹ್ಯಾಫ್ನಿಯಮ್ (ಕೂಪನ್‍ಹೇಗನ್‍ನ ಲ್ಯಾಟಿನ್ ಹೆಸರು) ಎಂದು ಕರೆದರು. ಏತನ್ಮಧ್ಯೆ ವಿಕಿರಣಪಟು ಕ್ಷೇತ್ರದಲ್ಲಿ ದೂರಗಾಮಿ ಸಂಶೋಧನೆಗಳಾಗಿದ್ದುವು. 1934ರಲ್ಲಿ ಐರೀನ್ ಕ್ಯೂರಿ (1897-1956, ಮೇಡಮ್ ಕ್ಯೂರಿಯ  ಮಗಳು) ಮತ್ತು ಆಕೆಯ ಪತಿ ಜಾಲ್ಯೋ ಕ್ಯೂರಿ (1900-58) ವಿಶೇಷ ರೀತಿಯ ಒಂದು ಬೈಜಿಕ ಕ್ರಿಯೆಯನ್ನು ಪತ್ತೆ ಮಾಡಿದರು. ಬೋರಾನ್ ಮತ್ತು ಅಲ್ಯೂಮಿನಿಯಮ್‍ನಂಥ ಹಗುರ ಲೋಹಗಳನ್ನು ಆಲ್ಫಾಕಣಗಳಿಂದ ತಾಡಿಸಿದಾಗ ಕ್ರಮವಾಗಿ ವಿಕಿರಣಪಟು ರಂಜಕ(15P30) ಮತ್ತು ವಿಕಿರಣಪಟು ನೈಟ್ರೊಜನ್(7ಓ13) ಉಂಟಾದುವು. ಇದರಿಂದ ಸ್ಥಿರಧಾತುಗಳನ್ನು ವಿಕಿರಣಪಟುಗೊಳಿಸುವುದು ಸಾಧ್ಯ ಎಂದು ಮನವರಿಕೆಯಾಯಿತು. ಇಂಥ ವಿಕಿರಣಪಟು ಸಮಸ್ಥಾನಿಗಳನ್ನು ಬಳಸಿ ಜೀವರಾಸಾಯನಿಕಕ್ರಿಯೆಗಳ ರೂಪರೇಷೆಗಳನ್ನು ಬಯಲಿಗೆಳೆದುದು ಈತನ ಇನ್ನೊಂದು ಮಹತ್ತ್ವದ ಶೋಧ. ಧಾತುವಿನ ವಿಕಿರಣಪಟು ಮತ್ತು ಸಹಜ ಸ್ಥಿರ ಸಮಸ್ಥಾನಿಗಳು ರಾಸಾಯನಿಕವಾಗಿ ಒಂದೇ ಆದ್ದರಿಂದ ಇವು ಜೀವಿಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳಲ್ಲಿ ಸರಿಸಮವಾಗಿ ಭಾಗವಹಿಸುತ್ತವೆ. ಸ್ಥಿರಸಮಸ್ಥಾನಿಯನ್ನು ವಿಕಿರಣಪಟು ಸಮಸ್ಥಾನಿ ಎಡೆಬಿಡದೆ ಹಿಂಬಾಲಿಸುತ್ತ ತನ್ನ ಅಸ್ತಿತ್ವವನ್ನು ಪ್ರಭಾವಿಸರ್ಜನೆಯಿಂದ ಸಾರುತ್ತಿರುತ್ತದೆ. ಆದ್ದರಿಂದ ಇಂಥ ವಿಕಿರಣಪಟು ಸಮಸ್ಥಾನಿಗಳನ್ನು ವೈದ್ಯಕೀಯದಲ್ಲಿ ರೋಗಪತ್ತೆಗಾಗಿ ಮತ್ತು ಕೃಷಿವಿe್ಞÁನದಲ್ಲಿ ಜೈವಿಕ ಕ್ರಿಯೆಗಳ ಸ್ವರೂಪದರ್ಶನಕ್ಕಾಗಿ ಬಳಸಬಹುದು ಎಂದು ಈತ ತೋರಿಸಿಕೊಟ್ಟ. ವಿಕಿರಣಪಟು ಸಮಸ್ಥಾನಿಗಳು ಸೂಚಕಗಳೆಂದೂ ಈ ಕಾರ್ಯವಿಧಾನವನ್ನು ಅನುರೇಚಕತಂತ್ರ ಎಂದೂ ಹೆಸರಿಸಲಾಯಿತು. ಅದ್ರಾವ್ಯವೆಂದು ಪರಿಗಣಿಸಲಾಗಿದ್ದ ಸೀಸದ ಲವಣಗಳು ಲವಲೇಶ ದ್ರಾವ್ಯವೆಂದು ಈ ವಿಧಾನದಿಂದ ಖಚಿತಪಡಿಸಿದ. ಆದರೆ ಈ ಸಂಶೋಧನೆಗೆ ಅಂದು (1923) ನಿರೀಕ್ಷಿತ ಮನ್ನಣೆ ಸಿಗಲಿಲ್ಲ. ಎರಡು ದಶಕಗಳ ಅನಂತರ (1943) ಜೀವರಕ್ಷಣೆಗಾಗಿ ಈತ ನಾಜಿ ಜರ್ಮನಿಯಿಂದ ಪಲಾಯನ ಮಾಡಿ ಸ್ವೀಡನ್‍ನ ಸ್ಟಾಕ್‍ಹೋಮ್‍ನಲ್ಲಿ ನೆಲಸಿದಾಗಲೇ ನೊಬೆಲ್ ಪ್ರಶಸ್ತಿ ಬಂದದ್ದು.												
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ